ಕಾರಹುಣ್ಣಿವೆ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಜ್ಯೇಷ್ಠಮಾಸದಲ್ಲಿ ಬರುವ ಹುಣ್ಣಿವೆಗೆ ಈ ಹೆಸರಿದೆ. ಇದನ್ನು ಕಾರಹಬ್ಬ ಎಂದೂ ಕರೆವುದಿದೆ. ಹೀಗೆಯೆ ಕನ್ನಡ ನಾಡಿನಲ್ಲಿ, ವರ್ಷದ ಹನ್ನೆರಡು ಹುಣ್ಣಿವೆಗಳಿಗೂ ಬೇರೆ ಬೇರೆ ಜನಪದ ನಾಮಗಳಿವೆ. ಆ ನಾಮಗಳನ್ನೂ ಆಯಾ ಹುಣ್ಣಿವೆಗಳ ದಿನ ಜನಸಾಮಾನ್ಯರು ನಡೆಯಿಸುವ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳನ್ನೂ ನಡೆವಳಿಗಳನ್ನೂ ಒಳಹೊಕ್ಕು ಸಂಶೋಧಕ ಬುದ್ಧಿಯಿಂದ ನೋಡಿದರೆ, ಹುಣ್ಣಿವೆಗಳ ಹೆಸರುಗಳೆಲ್ಲ, ಕನ್ನಡ ನಾಡಿನ ಕೃಷಿಕ ಕುಲಪರಂಪರೆಯಲ್ಲಿ ಮೂಡಿ ಮೇಲೆದ್ದುವು-ಎಂಬ ಅಂಶ ಕಂಡುಬಾರದಿರದು. ಯಜ್ಞಕರ್ಮಪ್ರಧಾನವಾದ ಸನಾತನ ಸಂಪ್ರದಾಯದಲ್ಲಿ, ಹುಣ್ಣಿವೆಗಳಿಗೆ ವಿಶಿಷ್ಟಪರ್ವದಿನದ ಸ್ಥಾನವಿರುವುದಾದರೂ ಕನ್ನಡ ನಾಡಿನಲ್ಲಿ ಹುಣ್ಣಿವೆಗಳಂದು ನಡೆಯುತ್ತ ಬಂದ ಜಾನಪದ ಸಂಸ್ಕøತಿ ಪ್ರಧಾನವಾದ ಕಾರ್ಯಕಲಾಪಗಳು, ಸನಾತನ ವೈದಿಕ-ಪರಂಪರೆಯವಾಗಿ ಕಾಣಿಸುವುದಿಲ್ಲ.

 ಕನ್ನಡ ನಾಡಿನ ಇಡಿಹಾಸದಲ್ಲಿ ಸಾವಿರ ವರ್ಷಗಳಿಗೆ ಹಿಂದಿನಿಂದಲೂ ಕಾರಹುಣ್ಣಿವೆಯ ಹೆಸರು ಬಳಕೆಯಲ್ಲಿ ಇದ್ದಂತೆ ಕಾಣುವುದು. ಕ್ರಿ.ಶ. 1007 ಮತ್ತು 1104ನೆಯ ವರ್ಷದ ಶಿಲಾಶಾಸನಗಳಲ್ಲಿ ಕಾರಹುಣ್ಣಿವೆ ಎಂಬ ಮಾತು ಬಂದಿದೆ. ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ಜಾನಪದ ಸಾಹಿತ್ಯ ಪರಂಪರೆಯಲ್ಲಿ ಈ ಹುಣ್ಣಿವೆಯ ಹೆಸರು ಹಲವಾರು ಸಲ ಕಿವಿಗೆ ಬೀಳುತ್ತದೆ. ಕಾರಹುಣ್ಣಿವೆ ಆದ ಮೇಲೆ (ಈರುಳ್ಳಿಯನ್ನು) ಕತ್ತೆ ಕೂಡ ಮೂಸುವುದಿಲ್ಲ, ಕಾರಹುಣ್ಣಿವೀ ಕರಿ ಹರಿದ ಮ್ಯಾಲೆ ಕಂಕಣಾ ಕಟ್ಟಬಾರದು-ಎಂಬ ನಾಣ್ಣುಡಿಗಳು ಕಾರಹುಣ್ಣಿವೆಯ ನಾಮನಿರ್ದೇಶನದೊಂದಿಗೆ, ಜಾನಪದ ಸ್ಮøತಿಯ ವಿಧಿನಿಷೇಧನಿಯಮಗಳನ್ನೂ ಹೇಳುತ್ತವೆ.

 ನಿಜವಾಗಿಯೂ ಕಾರಹುಣ್ಣಿವೆ ಅದರ ಹೆಸರೇ ತಿಳಿಸುವಂತೆ ಮಳೆಗಾಲದ ಮೊದಲ ಹುಣ್ಣಿವೆ; ದೇವಮಾತೃಕ ಭೂಮಿಯೇ ಹೆಚ್ಚಾಗಿರುವ ಕನ್ನಡನಾಡಿನ ಕೃಷಿಕರು, ಮಳೆಗಾಲದ ಮೊದಲ ಹುಣ್ಣಿಮೆಯನ್ನು ಸಂತೋಷದಿಂದ ಸ್ವಾಗತಿಸುವುದು ಸ್ವಾಭಾವಿಕವೇ ಸರಿ.

 ಕಾರಹುಣ್ಣಿವೆಯ ಆಚರಣೆ ಕನ್ನಡದ ಬಯಲು ನಾಡಿನಲ್ಲಿಯೆ ವಿಶೇಷವಾಗಿದೆ. ಗಡಿನಾಡಿನಲ್ಲಿಯೂ ಅಲ್ಲಲ್ಲಿ-ಬಯಲುನಾಡಿನ ಪ್ರಭಾವದಿಂದಾಗಿ-ಹಳ್ಳಿಗರು ಈ ಹಬ್ಬವನ್ನು ಆಚರಿಸುವುದುಂಟು. ಆದರೆ ಮಲೆನಾಡಿನ ಪ್ರದೇಶದಲ್ಲಿ ಈ ಹಬ್ಬದ ಆಚರಣೆಯ ಜನಪದ ಸಂಪ್ರದಾಯ, ಅಷ್ಟೊಂದು ಪ್ರಭಾವಶಾಲಿಯಾಗಿ ಕಂಡುಬರುವುದಿಲ್ಲ. ಉತ್ತರ ಕರ್ಣಾಟಕದ ಉತ್ತರದ ಗಡಿಗೆ ಹೊಂದಿದ ಮಹಾರಾಷ್ಟ್ರದ ಬಯಲು ಪ್ರದೇಶದ ಒಕ್ಕಲಿಗರಲ್ಲಿಯೂ ಈ ಹಬ್ಬದ ಪರಂಪರೆ ರೂಢಿಯಲ್ಲಿದೆ. ಮಹಾರಾಷ್ಟ್ರದ ಉತ್ತರದ ಸೀಮಾಪ್ರದೇಶವಾದ ವಿದರ್ಭ ಪ್ರಾಂತ್ಯದಲ್ಲಿಯೂ ಪೋಳಾಂಚಾ ಸಣ್ಣ ಎಂಬ ಹೆಸರಿನಿಂದ ಈ ಹಬ್ಬದ ಸಂಪ್ರದಾಯ ನಡೆದುಕೊಂಡು ಬಂದಿದೆ. ಇಲ್ಲಿ ಪೋಳ ಎಂದರೆ ಗೂಳಿ, ಕೊಬ್ಬಿದ ಹೋರಿ; ಸಣ್ಣ ಎಂದರೆ ಹಬ್ಬ. ಸಂಸ್ಕøತ ಭಾಷೆಯಲ್ಲಿ ಈ ಹುಣ್ಣಿವೆಗೆ ಅನಡ್‍ವಾಹ ಪೌರ್ಣಿಮಾ ಎಂದು ಹೆಸರಿದೆ. ಅನಡ್‍ವಾಹ-ಎಂದರೆ ಎತ್ತು. ಸಾಂಸ್ಕøತಿಕ ಪರಂಪರೆಯಲ್ಲಿಯೂ ಇದಕ್ಕೆ ಎತ್ತಿನ ಹುಣ್ಣವೆ ಎಂದು ಹೆಸರಿರುವುದೂ ಕಾರಹುಣ್ಣಿವೆಯ ಹಬ್ಬಕ್ಕಿರುವ ಕೃಷಿಕ ಕುಲಸಂಬಂಧವನ್ನೇ ಗಟ್ಟಿಗೊಳಿಸುತ್ತದೆ. ಎತ್ತು ಕೃಷಿಕನ ಪ್ರಧಾನ ಸಹಕಾರಿ. ಕೃಷಿಕರಲ್ಲದ ನಾಗರಿಕರೂ ಇಂದು ಹಬ್ಬದ ಸಂಪ್ರದಾಯದಂತೆ ಮಣ್ಣಿನ ಜೋಡೆತ್ತುಗಳನ್ನು ಮಾಡಿ ಪೂಜಿಸಿ, ಅದಕ್ಕೆ ಕೋಡಬಳೆ, ಕರಿಗಡಬಿನ ನೈವೇದ್ಯವೀಯುತ್ತಾರೆ.

 ಪೌರಾಣಿಕ ಸಂಪ್ರದಾಯದವರು ಈ ಹುಣ್ಣಿವೆಯನ್ನು ವಟಸಾವಿತ್ರಿ ಪೌರ್ಣಿಮೆ ಎಂದು ಹೇಳುವರು. ಕರ್ಣಾಟಕ, ಮಹಾರಾಷ್ಟ್ರ ಪ್ರದೇಶಗಳಲ್ಲಿರುವ, ಪುರಾಣಸಂಪ್ರದಾಯದ ಸುಮಂಗಲೆಯರು, ಅಂದು ವಟಸಾವಿತ್ರೀ ವ್ರತಪೂಜೆಗಳನ್ನು ಆಚರಿಸುವರು. ಅಯ್ದೆಯರೆಲ್ಲರೂ ಆ ದಿನ, ಸಾವಿತ್ರೀದೇವಿಯ ಸಾನ್ನಿಧ್ಯವೃಕ್ಷವೆಂದು, ಆಲದ ಮರವನ್ನು ಪೂಜಿಸುವರು; ಕೆಲವರು ಮನೆಯಲ್ಲಿಯೆ ಸಾವಿತ್ರೀದೇವಿಯ ಪಠವನ್ನಿರಿಸಿ ಪೂಜಿಸುವರು. ಸಾವಿತ್ರಿಯ ಕಥೆಯನ್ನು ಕೇಳುವರು. ಈ ಸಂಪ್ರದಾಯ ಕೇವಲ ನಾಗರಿಕ ಜಗತ್ತಿಗೆ ಸೇರಿದುದು.

 ಜ್ಯೇಷ್ಠ ಪೌರ್ಣಿಮೆಯಂದು ಎತ್ತುಗಳ ಪೂಜೆಯಾದ ಮೇಲೆ, ಮುಂದೆ ಆಷಾಢ ಮಾಸದ ಪ್ರತಿ ಮಂಗಳವಾರದಂದು, ಹಳ್ಳಿಗರ ಮನೆಗಳಲ್ಲಿಯೂ ಸಾರ್ವಜನಿಕವಾಗಿಯೂ ನಡೆಯುವ ಗುಳ್ಳವ್ವ ಎಂಬ ಹೆಸರಿನ ಮಣ್ಣಿನ ಪೂಜೆ ಅವರ ನೆಲದಮ್ಮನ ಪೂಜೆಯ ಸಂಕೇತವೆನಿಸುವಂತಿದೆ. ಕಾರಹುಣ್ಣಿವೆ ಆಚರಣೆಯಲ್ಲಿರುವ ಬಯಲು ನಾಡಿನಲ್ಲೆಲ್ಲ ಗುಳ್ಳವ್ವನ ಪೂಜೆ ಇದ್ದೇ ಇರುವುದು. ಗುಳ್ಳವ್ವ ಎಂಬ ದೇವತೆ ಕೆವಲ ಕನ್ನಡ ಜಾನಪದ ಸೃಷ್ಟಿ. ಈ ದೇವತೆ ಉತ್ತರದ ಸೀಮಾಪ್ರದೇಶದಲ್ಲಿರುವ ಮರಾಠಿಗರಲ್ಲಿಯೂ ಸೇರಿಕೊಂಡಿದ್ದಾಳೆ.

 ಕಾರಹುಣ್ಣಿವೆಗೆ ಸಂಬಂಧಿಸಿದ ಕಾರ್ಯಕಲಾಪಗಳು ಎರಡು ದಿನ ನಡೆಯುವುವು. ಜ್ಯೇಷ್ಠ ಶುದ್ಧ ಚತುರ್ದಶಿ ಕಾರಹಬ್ಬದ ಪೂರ್ವಾಂಗ ದಿನವಾಗಿರುವುದು. ಉತ್ತರಾಂಗ ದಿನ ಹುಣ್ಣಿವೆ. ಈ ಚತುರ್ದಶಿಗೆ ಹೊನ್ಹುಗ್ಗೆ (ಹೊನ್ಹುಗ್ಗಿ) ಎಂದು ಹೆಸರು. ಕೆಲವೆಡೆಗಳಲ್ಲಿ ಹೊನ್ನುಕ್ಕೆ ಎಂಬ ಹೆಸರೂ ಇದೆಯಂತೆ. ಹೊನ್ಹುಗ್ಗೆಯ ದಿನ ಹಳ್ಳಿಗರೆಲ್ಲರೂ ತಮ್ಮ ತಮ್ಮ ಮನೆಯ ಎತ್ತು, ಹೋರಿಗಳನ್ನು ಮೈ ತೊಳೆದು ಮೇಯಿಸುವರು. ಕೊಂಬುಗಳಿಗೆ ಚೆಂಬಣ್ಣವನ್ನು ತೊಡೆಯುವರು. ಮೈಮೇಲೆ ಅಂದ ಕಾಣುವಂತೆ ಕುಂಟೆಯ ಬಳೆಗಳಿಂದ, ಬೇರೆ ಬೇರೆ ಬಣ್ಣಗಳ ಮುದ್ರೆಗಳನ್ನು ಒತ್ತುವರು. ತುದಿಗೊಂಬುಗಳಿಗೆ ಮಿರುಗುವ ಕೊಂಬಣಸುಗಳನ್ನು ತೊಡಿಸುವರು. ಕೊರಳೊಳಗೆ ಹುರಿಗೆಜ್ಜೆ, ಕಿರುಗಂಟೆಗಳ ಸರಗಳನ್ನು ಹಾಕುವರು. ಹಣೆಗೆ ಕನ್ನಡಿ ಇರುವ ಹಣೆಪಟ್ಟುಗಳನ್ನು ಕಟ್ಟುವರು. ಗುಡಿಸಿ ಹಸನುಗೊಳಿಸಿದ ಕೊಟ್ಟಿಗೆಯಲ್ಲಿ ಸ್ಥಾನೌಚಿತ್ಯವನ್ನು ಅರಿತು ಅವನ್ನು ಕಟ್ಟುವರು.

 ಅಂದಿನ ಮುನ್ನಿರುಳಲ್ಲಿ, ಎಲ್ಲ ಎತ್ತು, ಹೋರಿಗಳನ್ನು ಪೂಜಿಸಲಾಗುವುದು. ಆಗ ಗುಗ್ಗುಳ ಧೂಪದ ಕಂಪು ಕೊಟ್ಟಿಗೆಯಲ್ಲೆಲ್ಲ ತುಂಬಿರುವುದು. ಮನೆಯ ಮುತ್ತೈದೆಯರು ಎತ್ತು, ಹೋರಿಗಳಿಗೆಲ್ಲ ಕಲಶದಾರತಿಯನ್ನು ಎತ್ತುವರು. ನೈವೇದ್ಯಕ್ಕೆಂದು ಜೋಳವನ್ನು ಕುಟ್ಟಿ, ಜೋಳದಕ್ಕಿಯಿಂದ ತಯಾರಿಸಿದ ಹುಗ್ಗಿಯನ್ನೂ (ಕಿಚಡಿ) ಅಂಬಲಿಯನ್ನೂ ಎತ್ತುಗಳಿಗೆಲ್ಲ ತಿನ್ನಿಸುವರು. ಆಮೇಲೆ ಮನೆಯವರೆಲ್ಲರೂ ಈ ಹುಗ್ಗಿ ಅಂಬಲಿಗಳನ್ನೇ ಪ್ರಸಾದವೆಂದು ಊಟ ಮಾಡುವರು. ಇಂದಿನ ಈ ಹುಗ್ಗಿಯೇ ಹೊನ್ಹುಗ್ಗಿ ಎಂದು ಹೆಸರು ಪಡೆದಿದೆ.

 ಮರುದಿನವೇ ಕಾರಹುಣ್ಣಿವೆ. ದನಗಳೆಲ್ಲ ಅಂದೂ ಪೂಜೆಗೊಳ್ಳುವುವು. ಮಧ್ಯಾಹ್ನ ಹೋಳಿಗೆ ಪಾಯಸಗಳ ಬಿರ್ದುಣಿಸು. ಕೆಲವೊಂದು ಹಳ್ಳಿಗಳಲ್ಲಿ ಹುರುಪಿನ ಜನ. ಊರಲ್ಲಿಯ ಎಲ್ಲ ಎತ್ತುಗಳನ್ನೂ ಸೇರಿಸಿ, ವಾದ್ಯವೈಭವದೊಂದಿಗೆ ಬೀದಿಯಲ್ಲಿ ಮೆರೆಸುವರು. ಕನ್ನಡನಾಡಿನ ಕೆಲವೊಂದು ಭಾಗದಲ್ಲಿ ಬಿತ್ತುವ ಬೀಜಗಳನ್ನು ಪೂಜಿಸುವ ಸಂಪ್ರದಾಯ ಕಾರಹುಣ್ಣಿವೆಯಂದೇ ನಡೆಯುತ್ತದೆ.

 ಹುಣ್ಣಿವೆಯ ಸಂಜೆ ಕರಿ ಹರಿಯುವ ಸಂಪ್ರದಾಯ. ಈ ಕಾರ್ಯಕ್ರಮ ಮಾತ್ರ ನಾಡಿನ ಎಲ್ಲ ಭಾಗಗಳಲ್ಲಿಯೂ ಸಾರ್ವಜನಿಕವಾಗಿ ನಡೆಯುತ್ತದೆ. ಈ ಕಾರ್ಯಕ್ರಮದ ವಿವರಗಳಲ್ಲಿ ಪ್ರಾದೇಶಿಕ ಭೇದಗಳು ಕಂಡುಬರುವುವಾದರು ಕರಿ ಹರಿಯುವುದು ಎಂಬ ಕ್ರಿಯಾನಾಮ ಮಾತ್ರ, ಸರ್ವತ್ರ ಸಾಮಾನ್ಯವಾಗಿರುವುದು. ಈ ಕಾರ್ಯಕ್ರಮದ ಪರಿಣಾಮ ಮುಂಬರುವ ಬೆಳೆಯ ಭವಿಷ್ಯವನ್ನು ಸೂಚಿಸುವುದೆಂಬ ನಂಬುಗೆ ನಾಡಿನ ಜನರೆಲ್ಲರಲ್ಲಿಯೂ ಇದೆ.

 ಕಾರಹುಣ್ಣವೆಯ ಕರಿ ಹರಿಯುವ ಸಂಪ್ರದಾಯ ಬಹುಭಾಗದಲ್ಲಿ ಇದೆಯಾದರೂ ಅದರಪೂರ್ವಾಂಗವಾದ ಕರಿ ಕಟ್ಟುವ ಸಂಪ್ರದಾಯ ಮಾತ್ರ ಕೆಲವೆಡೆಯೆ ಉಳಿದುಕೊಂಡು ಬಂದಿದೆ. ಕರಿ ಕಟ್ಟುವ ಸಂಪ್ರದಾಯದ ಅರ್ಥವನ್ನು ತಿಳಿದುಕೊಳ್ಳದೆ ಹೋದರೆ ಕರಿ ಹರಿಯುವ ರೂಢಿಯ ಅರ್ಥ ಆಗದು.

 ಫಾಲ್ಗುಣ ಬಹುಳ ಪ್ರತಿಪದೆಯಂದು-ಎಂದರೆ ಹೋಳಿಯ ಹಬ್ಬದ ಮರುದಿನ ಬೆಳಗಿನಲ್ಲಿ, ಹೋಳಿಯನ್ನು ಸುಟ್ಟಾದ ಮೇಲೆ, ಆ ಹೋಳಿಯ ಬೂದಿಯನ್ನು (ಕರಿ) ತಮ್ಮಟೆಗಳ ಮೊಳಗಿನೊಂದಿಗೆ, ಹಬ್ಬದ ವಿಶಿಷ್ಟ ಹಕ್ಕುದಾರರು ತೆಗೆದುಕೊಂಡೊಯ್ದು, ಗ್ರಾಮದ ಸುತ್ತಲೂ ಚೆಲ್ಲಿ ರಕ್ಷೆಯನ್ನು ಕಟ್ಟುವರು. ಈ ರಕ್ಷಾಬಂಧನ ಕ್ರಿಯೆಯೇ ಕರಿ ಕಟ್ಟುವುದು ಎಂಬ ಜನಪದ ಭಾಷಾರೂಪವನ್ನು ಹೊಂದಿದೆ. ಈ ನಡೆವಳಿಯ ಹಿಂದೆ ಹಳ್ಳಿಗರದೊಂದು ಮುಗ್ಧಶ್ರದ್ಧೆ ಅಡಗಿ ಕುಳಿತಿದೆ. ಹೋಳಿಯ ಹುಣ್ಣಿವೆಗೆಂದರೆ ಆ ವರ್ಷದ ಸುಗ್ಗಿಯ ಸಂಪತ್ತೆಲ್ಲವೂ ಊರಮನೆಗಳನ್ನು ತುಂಬಿರುತ್ತದೆ. ಈ ಸಂಪತ್ತಿಗೆ ಯಾವುದೇ ಬಗೆಯ ಭೀತಿ, ಉಪದ್ರವಗಳು ಉಂಟಾಗನಬಾರದೆಂಬ ಅವರ ಭಾವನೆ, ಈ ಕರಿ ಕಟ್ಟುವ ಸಂಪ್ರದಾಯವನ್ನು ಇದುವರೆಗೆ ಉಳಿಸಿಕೊಂಡು ಬಂದಿದೆ. ಧಾನ್ಯ ತುಂಬಿದ ಹಗೇವು, ಸೊಪ್ಪು ಒಟ್ಟಿದ ಬಣವೆ-ಇವುಗಳಿಗೆ, ಕಾರಹುಣ್ಣಿವೆಯಾಗುವ ವರೆಗೂ ಕೈಹಚ್ಚಬಾರದೆಂದಿರುವ ಹಳ್ಳಿಗಳ ನಂಬುಗೆ, ಈ ಸಂಪ್ರದಾಯವನ್ನು ಪುರಸ್ಕರಿಸುವಂಥದಾಗಿದೆ. ಹೋಳಿಯ ಹಬ್ಬದಲ್ಲಿ ಕಟ್ಟಿದ ಕರಿಯನ್ನು (ರಕ್ಷೆ) ಕಾರಹುಣ್ಣಿವೆಯ ಸಂಜೆ ಹರಿಯುವ ಸಾಂಕೇತಿಕ ಕಾರ್ಯವೊಂದು, ಸಾರ್ವಜನಿಕವಾಗಿ ಜರುಗುವುದು. ಇದೇ ಕರಿ ಹರಿಯುವ (ರಕ್ಷಾವಿಮೋಚನ) ಕಾರ್ಯ.

 ಕರಿ ಹರಿಯುವ ಸಂಪ್ರದಾಯದ ಸಾಂಕೇತಿಕ ಉಪಕರಣಗಳಲ್ಲಿ ಪ್ರಾದೇಶಿಕ ಭೇದಗಳು ಕಂಡುಬರುವುವಾದರೂ ಬೇರೆ ಬೇರೆ ಬಣ್ಣದ ಎತ್ತುಗಳು ಮಾತ್ರ ಸರ್ವತ್ರ ಸಾಮಾನ್ಯವಾಗಿರುವುವು. ಆದರೆ ಬಯಲುಸೀಮೆಯ ಬಹುಭಾಗದಲ್ಲಿ ಈ ಕಾರ್ಯಕ್ರಮಕ್ಕೆ ಕರಿದು ಬಿಳಿದು ಅಥವಾ ಕೆಂದು ಬಿಳಿದು-ಹೀಗೆ ಎರಡೇ ಎತ್ತುಗಳು ಬೇಕಾಗುವುವು. ಬೇರೆ ಕೆಲವೆಡೆ ಐದು ಎತ್ತುಗಳು ಬೇಕೆಂಬ ನಿಯಮವಿರುವುದು. ಇನ್ನು ಕೆಲವೆಡೆ ಊರಲ್ಲಿಯ ಎಲ್ಲ ಎತ್ತುಗಳನ್ನು ತರಲಾಗುವುದು.

 ಈ ಕಾರ್ಯಕ್ರಮದಲ್ಲಿ, ಇಂಥಿಂಥ ಕಾರ್ಯಗಳನ್ನೂ ಈಯೀ ಮನೆತನದವರೇ ವಹಿಸಿಕೊಳ್ಳಬೇಕೆಂಬ ನಿಯಮ, ವಂಶಾನುಗತವಾಗಿ ನಡಿದುಕೊಂಡು ಬಂದಿದೆ. ವಿಶಿಷ್ಟ ಕಾರಣಗಳಿಲ್ಲದೆ ಈ ನಿಯಮದ ಉಲ್ಲಂಘನೆಯಾಗುವಂತಿಲ್ಲ. ಊರ ಗೌಡ (ಪಟೇಲ), ಹತ್ತು ಸಮಸ್ತರು (ಪಂಚರು), ಹಕ್ಕುದಾರರು-ಇವರೇ ಈ ನಡೆವಳಿಕೆಯಲ್ಲಿ ಗೊತ್ತಾದ ವ್ಯವಸ್ಥಾಪಕರು.

 ಕರಿ ಹರಿಯುವ ಪ್ರಮುಖ ಸಾಂಕೇತಿಕ ಸಾಧನವೆಂದರೆ, ಬೇವು, ಮಾವುಗಳ ತೊಂಗಲುಗಳಿಂದ ಮಾಡಿದ ತೋರಣವನ್ನು (ಸರಮಾಲೆ) ಎತ್ತುಗಳಿಂದ ಹರಿಸುವುದು. ಮಧ್ಯೇ ಮಧ್ಯೇ ಅದರಲ್ಲಿ ತೆಂಗಿನಕಾಯಿ ಕೊಬ್ಬರಿಬಟ್ಟಲುಗಳನ್ನೂ ಕಟ್ಟಿರುತ್ತಾರೆ. ಊರ ಅಗಸೆಯ ಮುಂಗಡೆ ಎಡ-ಬಲ ಬದಿಗಳಲ್ಲಿ ನಿಂತುಕೊಂಡಿರುವ ಕರೀ ಕಲ್ಲುಗಂಬಗಳಿಗೆ, ಎತ್ತುಗಳ ನಿಲುವಿನಳತೆಗೆ ಸರಿಯಾಗುವಂತೆ, ಕರಿಯ ಸರಮಾಲೆಯನ್ನು ಕಟ್ಟಲಾಗುವುದು. ಹಬ್ಬದ ಉಡಿಗೆತೊಡಿಗೆಗಳಿಂದ ಸಿಂಗರಗೊಂಡ ಜನಜಂಗುಳಿ ಕುತೂಹಲಭಾವವನ್ನು ಹೊತ್ತು ಅಲ್ಲಿ ನೆರದಿರುವುದು. ಆಗ, ಗೊತ್ತುಮಾಡಿದ ಮನೆಯ ಎತ್ತುಗಳನ್ನು, ವಾದ್ಯವೃಂದದ ಗುಲ್ಲುಗಲಾಟೆಯೊಂದಿಗೆ ಮೆರವಣಿಗೆ ಮಾಡುತ ಅಗಸೆಯ ಒಳಬಾಗಿಲಿಗೆ ತಂದು ನಿಲ್ಲಿಸುವರು. ಗರತಿಯರು ಎತ್ತುಗಳಿಗೆ ಆರತಿಯನ್ನೆತ್ತಿ ನಿವಾಳಿ ತೆಗೆಯುವರು.

 ಬಳಿಕ ಸಿದ್ಧವಾಗಿ ನಿಂತ ಎತ್ತುಗಳನ್ನು ಹೊಡೆದು ಹೆದರಿಸಿ ರಭಸದಿಂದ ಓಡಿಸಲಾಗುವುದು, ಕರಿಯ ತೋರಣದ ತಡೆಯನ್ನು ಹರಿದು ಎತ್ತುಗಳು ಮುನ್ನುಗ್ಗಿ ಓಡುವುವು. ಈ ಓಟದ ಮೇಲಾಟದಲ್ಲಿ ಕರಿದು ಅಥವಾ ಕೆಂದು ಎತ್ತು ಮುಂದಾದರೆ ಆ ವರ್ಷ ಮುಂಗಾರು ಧಾನ್ಯಗಳು ಹೆಚ್ಚಾಗಿ ಬೆಳೆಯುವುವೆಂದೂ ಬಿಳಿಯ ಎತ್ತು ಮುಂದಾದರೆ ಹಿಂಗಾರು ಧಾನ್ಯಗಳ ಸಮೃದ್ಧಯೆಂದೂ ನಂಬುವ ಭಾವನಾತ್ಮಕ ಪರಂಪರೆ ಹಳ್ಳಿಗರಲ್ಲಿದೆ. ಇದೆಲ್ಲ ಕಾರ್ಯಕ್ರಮ ಮುಗಿದ ಮೇಲೆ. ಅದರಲ್ಲಿ ಭಾಗವಹಿಸಿದ ಎತ್ತುಗಳನ್ನು, ಊರಲ್ಲಿ ಮೆರೆಸುತ್ತ ಅವರವರ ಮನೆಗೆ ತಲಪಿಸಲಾಗುವುದು. ಇಲ್ಲಿಗೆ ಹಬ್ಬದ ಆಚರಣೆ ಪೂರ್ತಿಗೊಂಡಂತಾಗುವುದು. ಕರಿಹರಿದ ಮೇಲೆಯೇ ಬಿತ್ತುವ ಬೀಜಗಳು ಹೊಲಗಳಿಗೆ ಹೋಗಬೇಕು. ಅಲ್ಲಿಯವರೆಗೂ ಬಿತ್ತನೆಯ ಕೆಲಸ ನಡೆಯಕೂಡದೆಂದು ಸಾಂಪ್ರದಾಯಿಕ ನಿಬಂಧವೂ ಇದೆ.       (ನೋಡಿ- ಕರ್ಣಾಟಕದ-ಹಬ್ಬಗಳು)

(ಬಿ.ಕೆ.ಆರ್.